ಮಹಾದೇವ 2	 - 

13ನೆಯ ಶತಮಾನದಲ್ಲಿ ಬಾಳಿದ ಸೇವುಣ ದೊರೆ. ಕೆಲಕಾಲ ತನ್ನ ಅಣ್ಣನಾದ ಕನ್ನರನೊಡಗೂಡಿ ರಾಜ್ಯವಾಳಿ ಅನಂತರ 1261ರಲ್ಲಿ ಪಟ್ಟವನ್ನೇರಿದ. ಇವನು ತನ್ನ ರಾಜ್ಯವಿಸ್ತರಣೆಗೆಂದು ನೆರೆಯ ಅರಸರಾದ ಪರಮಾರರು ಗೂರ್ಜರರು, ಕಾಕತೀಯರು ಮತ್ತು ಹೊಯ್ಸಳರೊಡನೆ ಕದನ ಹೂಡಿದ. ಆದರೆ ಯಾವ ಯುದ್ಧದಿಂದಲೂ ಇವನಿಗೆ ವಿಶೇಷ ಪ್ರಯೋಜನವಾಗಲಲ್ಲಿ. ಇವನ ಸಮಕಾಲೀನಳಾದ ಕಾಕತೀಯ ಅರಸಿ ರುದ್ರಾಂಬೆ ಮಹಾದೇವನ ದಾಳಿಯನ್ನು ಎದುರಿಸಿದಳಲ್ಲದೆ ಇವನನ್ನು ದೇವಗಿರಿಯವರೆಗೆ ಹಿಂದಕ್ಕೆ ಅಟ್ಟಿದಳು ಕೂಡ. ಮಹಾದೇವ ಪರಾಭವದೊಂದಿಗೆ ರುದ್ರಾಂಬೆಗೆ ಒಂದು ಕೋಟಿ ಚಿನ್ನದ ನಾಣ್ಯಗಳನ್ನು ಕಪ್ಪಕೊಡಬೇಕಾಯಿತು. ಶಿಲಾಹಾರದ ಮನೆತನದ ಸೋಮೇಶ್ವರನೊಡನೆ ಯುದ್ಧಹೂಡಿದ. ಈ ಘೋರಯುದ್ಧದಲ್ಲಿ ಸೋಮೇಶ್ವರ ಮೃತನಾಗಿ ಕೊಂಕಣ ದೇಶ ಸೇವುಣ ರಾಜ್ಯದ ಒಂದು ಅಂಗವಾಯಿತು. 

ಇವನು 1221ರ ತನಕ ರಾಜ್ಯವಾಳಿದ. ಅನಂತರ ಇವನ ಮಗ ಅಮಣ ಪಟ್ಟಣವನ್ನೇರಿದ. ಆದರೆ ಅದಾದ ಕೆಲವೇ ತಿಂಗಳುಗಳಲ್ಲಿ ಕನ್ನರನ ಮಗ ರಾಮಚಂದ್ರ ಅಮಣನನ್ನು ಕೊಂದು ರಾಜ್ಯವನ್ನು ತನ್ನ ವಶಪಡಿಸಿಕೊಂಡ.														
(ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ